ಭೀಷ್ಮ
ಮಹಾಭಾರತದ ಪ್ರಸಿದ್ಧ ಪುರುಷರಲ್ಲಿ ಒಬ್ಬ. ಶಂತನು ಮಹಾರಾಜನಿಂದ ಗಂಗಾದೇವಿಯಲ್ಲಿ ಜನಿಸಿದ ಎಂಟು ಮಂದಿ ಪುತ್ರರಲ್ಲಿ ಕೊನೆಯವ. ಕೌರವ-ಪಾಂಡವರಿಗೆ ವಾವೆಯಲ್ಲಿ ತಾತ. ಆಜನ್ಮ ಬ್ರಹ್ಮಚಾರಿಯಾಗಿ ಬಾಳಿದವ. ಸತ್ಯವ್ರತ, ದೇವವ್ರತ, ಗಾಂಗೇಯ ಇವು ಈತನಿಗಿದ್ದ ಇತರ ಹೆಸರುಗಳು. ಈತ ವಸುವಿನ ಅವತಾರ ಎಂದೂ ನಂಬಲಾಗಿದೆ. ವಸಿಷ್ಠ ಮುನಿಯ ಶಾಪದಿಂದಾಗಿ ಭೂಲೋಕದಲ್ಲಿ ಹುಟ್ಟಿದ. ಈತ ಜನಿಸಿದ ಕೂಡಲೇ ಗಂಗಾದೇವಿ ಈತನನ್ನು ತನ್ನ ಲೋಕಕ್ಕೆ ಕರೆದುಕೊಂಡು ಹೋಗಿ ಪರಶುರಾಮನಲ್ಲಿ ಧನುರ್ವಿದ್ಯಾಪಾರಂಗತನಾಗಿಸಿದಳು. ಶಂತನು ಚಕ್ರವರ್ತಿ ಮತ್ತೊಮ್ಮೆ ಗಂಗಾತೀರಕ್ಕೆ ಬಂದಿದ್ದಾಗ ಗಂಗೆ ಈತನಿಗೆ ಭೀಷ್ಮನನ್ನು ಒಪ್ಪಿಸಿದಳು. ಶಂತನು ಭೀಷ್ಮನನ್ನು ತನ್ನ ರಾಜ್ಯಕ್ಕೆ ಕರೆದು ಕೊಂಡು ಹೋಗಿ ಯುವರಾಜ್ಯಾಭಿಷೇಕ ಮಾಡಿದ.

	ಒಂದು ದಿನ ಶಂತನು ದಾಶರಾಜನ ಪುತ್ರಿ ಸತ್ಯವತಿಯನ್ನು ನೋಡಿ ಮೋಹಗೊಂಡು ಆಕೆಯನ್ನು ವಿವಾಹವಾಗುವುದಾಗಿ ದಾಶರಾಜನಿಗೆ ತಿಳಿಸಿದ. ಆದರೆ ದಾಶರಾಜ ಮುಂದೆ ಸತ್ಯವತಿಯ ಗರ್ಭದಲ್ಲಿ ಜನಿಸಿದ ಪುತ್ರನನ್ನು ಉತ್ತರಾಧಿಕಾರಿಯಾಗಿ ಮಾಡುವುದಾಗಿ ಮಾತುಕೊಟ್ಟರೆ ಮಗಳನ್ನು ಕೊಡವುದಾಗಿ ಕರಾರು ಹಾಕಿದ. ಶಂತನುವಿಗೆ ಇದು ಸಮ್ಮತವಾಗದಿದ್ದರೂ ಅವನ ಮನಸ್ಸಲ್ಲೆಲ್ಲ ಸತ್ಯವತಿ ತುಂಬಿಕೊಂಡಿದ್ದಳು. ಇದರಿಂದಾಗಿ ಶಂತನು ವ್ಯಾಕುಲನಾಗಿದ್ದ. ಈ ವಿಷಯ ಮಂತ್ರಿಯ ಮೂಲಕ ತಿಳಿದುಕೊಂಡ ಭೀಷ್ಮ ದಾಶರಾಜನಲ್ಲಿಗೆ ಹೋಗಿ ಸಂಧಾನ ನಡೆಸಿ, ತಾನು ಮದುವೆಮಾಡಿಕೊಳ್ಳದೆ ಬ್ರಹ್ಮಚಾರಿಯಾಗಿಯೇ ಉಳಿಯುವುದಾಗಿ ಪ್ರತಿಜ್ಞೆಮಾಡಿ ಸತ್ಯವತಿಯೊಂದಿಗೆ ತನ್ನ ತಂದೆಯ ವಿವಾಹ ನೆರವೇರಿಸಿದ. ಸಂತೋಷಗೊಂಡ ತಂದೆ ಮಗನಿಗೆ ಇಚ್ಛಾಮರಣಿಯಾಗೆಂದು ವರವಿತ್ತ. ಮುಂದೆ ಭೀಷ್ಮ ಸತ್ಯವತಿಯ ಮಗ ವಿಚಿತ್ರವೀರ್ಯನಿಗಾಗಿ ಕಾಶೀರಾಜನ ಪುತ್ರಿಯಾದ ಅಂಬೆ, ಅಂಬಿಕೆ, ಅಂಬಾಲಿಕೆಯರನನ್ನು ಅಪಹರಿಸಿಕೊಂಡು ಬಂದ. ಆದರೆ ಅಂಬೆ ವಿಚಿತ್ರ ವೀರ್ಯವನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು ಸಾಲ್ವರಾಜನಲ್ಲಿಗೆ ಕಳುಹಿಸಿಕೊಟ್ಟ. ವಿಚಿತ್ರವೀರ್ಯನಿಗೆ ಸಂತಾನ ಇರಲಿಲ್ಲ. ಅವನ ಸಾವಿನ ಅನಂತರ ವಂಶ ನಿಂತುಹೋಗುವ ಸ್ಥಿತಿಗೆ ಬಂತು. ಆಗ ಸತ್ಯವತಿ ಅಂಬಿಕೆ, ಅಂಬಾಲಿಕೆಯವರೊಂದಿಗೆ ಸಂತಾನಕ್ಕಾಗಿ ಕೂಡಲು ಭೀಷ್ಮನನ್ನು ಪ್ರೇರಿಸಿದರೂ ಅದಕ್ಕೆ ಭೀಷ್ಮ ಒಪ್ಪಲಿಲ್ಲ. ಬಳಿಕ ಸತ್ಯವತಿ ಭೀಷ್ಮನ ಸೂಚನೆ ಮೇರೆಗೆ ವ್ಯಾಸನನ್ನು ಬರಮಾಡಿಕೊಂಡು ಅಂಬಿಕೆ, ಅಂಬಾಲಿಕೆಯರಲ್ಲಿ ಸಂತಾನವನ್ನು ಅನುಗ್ರಹಿಸಲು ಕೇಳಿ ಕೊಂಡಳು.

	ಕೌರವ ಪಾಂಡವರನ್ನು ಚಿಕ್ಕಂದಿನಿಂದಲೂ ಪೋಷಿಸಿದವ ಭೀಷ್ಮ. ಅವರಿಗೆ ಕೃಪಾಚಾರ್ಯ ಮತ್ತು ದ್ರೋಣಾಚಾರ್ಯರಿಂದ ಬಿಲ್ಲುವಿದ್ಯೆ ಹೇಳಿಸಿದ. ಭೀóಷ್ಮ ಕೌರವರ ಜೊತೆಯಲ್ಲಿದ್ದರೂ ಪಾಂಡವರ ಬಗ್ಗೆ ಮಮತೆ ಇರಿಸಿಕೊಂಡಿದ್ದ. ದುರ್ಯೋಧನ ಕಪಟೋಪಾಯದಿಂದ ಪಾಂಡವರನ್ನು ಅರಗಿನಮನೆಯಲ್ಲಿ ಭಸ್ಮ ಮಾಡಿದ ಎಂಬ ಸುದ್ದಿ ತಿಳಿದು ವ್ಯಸನಪಟ್ಟ. ಆನಂತರ ವಿದುರನಿಂದ ಪಾಂಡವರು ಬದುಕಿರುವ ಸುದ್ದಿ ತಿಳಿದು ಸಂತೋಷಗೊಂಡ. ದುರ್ಯೋಧನನ ದುರ್ನಡತೆ ಬಗ್ಗೆ ಭೀಷ್ಮನಿಗೆ ಅಸಮಾಧಾನ ಇತ್ತು; ಅವನಿಗೆ ಆಗಾಗ ಬುದ್ಧಿಯನ್ನೂ ಹೇಳುತ್ತಿದ್ದ. ಪಾಂಡವರ ಸಚ್ಚಾರಿತ್ರ್ಯದ ಬಗ್ಗೆ ಸಂತೋಷಗೊಂಡಿದ್ದ ಭೀಷ್ಮ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ರಾಜ್ಯವನ್ನು ಕೊಟ್ಟುಬಿಡಲು ಕೌರವನಿಗೆ ವಿವೇಕ ಹೇಳಿದ. ಆದರೆ ದುರ್ಯೋಧನ ಈತನ ಮಾತನ್ನು ಕೇಳಲಿಲ್ಲ. ರಾಜಸೂಯ ಯಾಗದ ಕೊನೆಯಲ್ಲಿ ಕೃಷ್ಣನಿಗೆ ಅಗ್ರಪೂಜೆ ಸಲ್ಲಿಸುವಂತೆ ಸೂಚಿಸಿದವ ಭೀಷ್ಮನೇ. ಅಗ್ರಪೂಜೆ ಸಂದರ್ಭದಲ್ಲಿ ಶಿಶುಪಾಲ ಕೃಷ್ಣನನ್ನು ಅಪಹಾಸ್ಯ ಮಾಡಿದಾಗ ಭೀಷ್ಮ ಕೃಷ್ಣನ ಮಹಿಮೆಯನ್ನು ಬಣ್ಣಿಸಿದ. ಪಾಂಡವರ ಅಜ್ಞಾತವಾಸ ಭಗ್ನಗೊಳಿಸುವಲ್ಲಿ ದುರ್ಯೋಧನನಿಗೆ ವಿವೇಕ ಹೇಳಿದರೂ ಕೇಳದಾದಾಗ ಕೊನೆಗೆ ದಕ್ಷಿಣ ಗೋಗ್ರಹಣಕ್ಕೆ ಸುಶರ್ಮನನ್ನು ಕಳುಹಿಸಲು ಸಮ್ಮತಿಸಿದ. ತಾನು ಉತ್ತರ ಗೋಗ್ರಹಣಕ್ಕಾಗಿ ವಿರಾಟನಗರಕ್ಕೆ ಹೊರಟ. ಪಾಂಡವರ ಪತ್ತೆಯಾಗಿ ಅಜ್ಞಾತವಾಸದ ಗಡು ಇನ್ನೂ ಮುಗಿಯಲಿಲ್ಲವೆಂದು ಕೌರವ ಹಠಹಿಡಿದಾಗ ಭೀಷ್ಮ ಗಡು ಮುಗಿಯಿತೆಂದು ತಿಳಿಸಿದ. ಭೀಷ್ಮ ಅರ್ಜುನನನ್ನು ಗುರುತಿಸಿ ಅವನ ಮೇಲೆ ಬೀಳಲು ಹೋಗಿ ಪರಸ್ಪರ ಯುದ್ಧವಾಗಿ ಸೋಲು ಭೀಷ್ಮನದಾಯಿತು. ಕೃಷ್ಣಾರ್ಜುನರು ನಾರಾಯಣ ಮತ್ತು ನರರ ಅವತಾರ ಎಂಬುದನ್ನು ಭೀಷ್ಮ ದುರ್ಯೋಧನನಿಗೆ ತಿಳಿಯಹೇಳಿದ. ಅಪ್ರಿಯವಾದ ಈ ಮಾತನ್ನು ಕೇಳಿದ ಕೌರವ ತನ್ನ ಅಸಮ್ಮತಿ ಸೂಚಿಸಿದ. ಕಟ್ಟಕಡೆಯದಾಗಿ ಪಾಂಡವರೊಂದಿಗೆ ಯುದ್ಧ ಹೂಡುವುದು ಎಂದಾಗ ಭೀಷ್ಮ ಯುದ್ಧಕ್ಕೆ ಒಪ್ಪಲಿಲ್ಲ. ಆದರೆ ಭೀಷ್ಮನಿಲ್ಲದೆಯೂ ಕರ್ಣನ ಸಹಾಯದಿಂದ ತಾನು ಗೆಲ್ಲುವೆನೆಂದು ದುರ್ಯೋಧನ ಬೀಗಿದಾಗ ಭೀಷ್ಮ ಕರ್ಣನನ್ನು ಹೀಗಳೆದ. ಆಗ ಕರ್ಣ ಭೀಷ್ಮ ಸಾಯುವತನಕ ತಾನು ಶಸ್ತ್ರ ಹಿಡಿಯುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ. ಅದರಿಂದ ಕೋಪಗೊಂಡ ಭೀಷ್ಮ ಯುದ್ಧದಲ್ಲಿ ದಿನಕ್ಕೆ ಹತ್ತು ಸಾವಿರ ಮಂದಿ ವೀರರನ್ನು ಸಂಹರಿಸುವುದಾಗಿ ಪ್ರತಿಜ್ಞೆ ಮಾಡಿದ.

	ಮಹಾಭಾರತ ಯುದ್ಧದಲ್ಲಿ ಭೀಷ್ಮನಿಗೆ ದುರ್ಯೋಧನ ಮೊದಲ ಯುದ್ಧಪಟ್ಟಿ ಕಟ್ಟಿ ದುಶ್ಯಾಸನನನ್ನು ಅವನ ಬೆಂಗಾವಲಿಗೆ ನಿಲ್ಲಿಸಿದ. ಭೀಷ್ಮ ತನ್ನ ಸಾಮಥ್ರ್ಯವನ್ನು ವರ್ಣಿಸಿ ದುರ್ಯೋಧನನಿಗೆ ಆಶ್ವಾಸನೆ ನೀಡಿದ. ಶಿಖಂಡಿಗೆ ಸಂಬಂಧಿಸಿದ ಪೂರ್ವವೃತ್ತಾಂತವನ್ನು ದುರ್ಯೋಧನನಿಗೆ ತಿಳಿಸಿದ ಭೀಷ್ಮ, ಅವಳು ಹೆಂಗಸೆಂದು ಅವಳ ಸಂಗಡ ಯುದ್ಧ ಮಾಡಲು ಸಾಧ್ಯವಿಲ್ಲವೆಂದು ಹೇಳಿದ. ಮಹಾಭಾರತ ಯುದ್ಧದ ಮೊದಲ ದಿನ ಶ್ವೇತನನ್ನು ಕೊಂದ. ಭೀಮ ಮತ್ತು ಅರ್ಜುನರೊಡನೆಯೂ ಭೀಷ್ಮ ಯುದ್ಧ ಮಾಡಿದ. ಕೃಷ್ಣ ಇದ್ದಲ್ಲಿ ಜಯವಿರುತ್ತದೆ ಎಂದು ನಂಬಿದ್ದ ಭೀಷ್ಮ ಕೊನೆಗೆ ಪಾಂಡವರ ಸಂಗಡ ರಾಜಿ ಮಾಡಿಕೊಳ್ಳಲು ದುರ್ಯೋಧನನಿಗೆ ತಿಳಿಸಿದ.

	ಯುದ್ಧದ ಎಂಟನೆಯ ದಿನ ರಾತ್ರಿ ಭೀಷ್ಮ ಶಸ್ತ್ರವನ್ನು ಕೆಳಗಿಟ್ಟರೆ ಪಾಂಡವರನ್ನು ನಾನು ಕೊಲ್ಲುತ್ತೇನೆ ಎಂದು ಕರ್ಣ ಹೇಳಿದ. ಆಗ ದುರ್ಯೋಧನ ಭೀಷ್ಮನಲ್ಲಿಗೆ ಹೋಗಿ ಸೇನಾಧಿಪತ್ಯವನ್ನು ತ್ಯಜಿಸುವಂತೆ ಕೇಳಿಕೊಂಡ. ಆಗ ಭೀಷ್ಮ ಅರ್ಜುನನನ್ನು ಕೊಲ್ಲುವುದು ಅಸಾಧ್ಯವೆಂದು ದುರ್ಯೋಧನನಿಗೆ ಹೇಳಿದ. ಯುದ್ಧದ ಒಂಬತ್ತನೆಯ ದಿನ ರಾತ್ರಿ ಕೃಷ್ಣ ಯುಧಿಷ್ಠಿರನನ್ನು ಭೀಷ್ಮನ ಬಳಿಗೆ ಕಳುಹಿಸಿ ಆತನ ವಧೆಗೆ ಉಪಾಯವನ್ನು ತಿಳಿದು ಬರಲು ಹೇಳಿದ. ಭೀಷ್ಮ ತನ್ನ ಸಾವಿನ ರಹಸ್ಯವನ್ನು ಯುಧಿಷ್ಠರನಿಗೆ ತಿಳಿಸಿದ. ಹತ್ತನೆಯ ದಿನ ಶಿಖಂಡಿ ಯುದ್ಧಕ್ಕೆ ಇಳಿದಾಗ ಭೀಷ್ಮ ಶಸ್ತ್ರ ತ್ಯಾಗಮಾಡಿ ನೆಲದಮೇಲೆ ಬಿದ್ದ. ರಣರಂಗದಲ್ಲಿದ್ದ ಅರಸರೆಲ್ಲ ಬಂದು ಭೀüಷ್ಮನ ಪಾದಗಳಿಗೆ ವಂದಿಸಿದರು. ಅರ್ಜುನ ಭೀಷ್ಮನಿಗೆ ಅಂಬಿನ ಹಾಸಿಗೆ ನಿರ್ಮಿಸಿ ಆತನ ಬಾಯಾರಿಕೆ ನೀಗಲು ಪರ್ಜನ್ಯಾಸ್ತ್ರದಿಂದ ನೆಲವನ್ನು ಭೇದಿಸಿ ಪಾತಾಳಗಂಗೆಯಿಂದ ನೀರಡಕೆ ನೀಗಿಸಿದ. ಚೇತರಿಸಿ ಕೊಂಡ ಭೀಷ್ಮ ದುರ್ಯೋಧನನಿಗೆ ಅರ್ಜುನನ ಪರಾಕ್ರಮವನ್ನು ವರ್ಣಿಸಿ ಪಾಂಡವರೊಂದಿಗೆ ಸಂಧಿಮಾಡಿಕೊಳ್ಳಲು ತಿಳಿಯ ಹೇಳಿದ. ಆ ರಾತ್ರಿ ಎಲ್ಲರೂ ಹೊರಟು ಹೋದಮೇಲೆ ಕರ್ಣ ಭೀಷ್ಮನಲ್ಲಿಗೆ ಬಂದು ತನ್ನ ದುಡುಕಿನ ಬಗ್ಗೆ ಕ್ಷಮೆ ಕೇಳಿದಾಗ ಭೀಷ್ಮ ಕರ್ಣನಿಗೆ ಅವನ ಜನ್ಮವೃತ್ತಾಂತ ತಿಳಿಸಿ ಪಾಂಡವರ ಕಡೆ ಸೇರಿಕೊಳ್ಳಲು ತಿಳಿಹೇಳಿದ. ಆದರೆ ಕರ್ಣ ಯುಕ್ತಿಯಿಂದ ನುಣುಚಿಕೊಂಡ. ಭೀಷ್ಮನಿಂದ ಧರ್ಮರಹಸ್ಯ ತಿಳಿಯಲು ಕೃಷ್ಣ ಯುಧಿಷ್ಠರನನ್ನು ಭೀಷ್ಮನಲ್ಲಿಗೆ ಕಳುಹಿಸಿದ. ಪಾಂಡವರು ಕೃಷ್ಣನನ್ನೊಡಗೂಡಿ ಈತನಲ್ಲಿಗೆ ಬಂದಾಗ ಭೀಷ್ಮ ಕೃಷ್ಣನನ್ನು ಸ್ತುತಿಸಿದ. ಕೃಷ್ಣನ ಕೋರಿಕೆಯ ಮೇರೆಗೆ ಯುಧಿಷ್ಠರನಿಗೆ ಧರ್ಮೋಪದೇಶ ನೀಡಿದ ಭೀಷ್ಮ ತನಗೆ ಶ್ರೇಯಸ್ಸನ್ನು ನೀಡುವಂತೆ ಕೃಷ್ಣನನ್ನು ಪ್ರಾರ್ಥಿಸಿದ. ತನ್ನ ಅವಸಾನವನ್ನು ತಿಳಿದುಕೊಂಡಿದ್ದ ಭೀಷ್ಮ ಉತ್ತರಾಯಣ ಬರುವತನಕ ಕಾದು ಯೋಗ ಬಲದಿಂದ ಬ್ರಹ್ಮರಂಧ್ರದ ಮೂಲಕ ಜೀವವಾಯುವನ್ನು ಬಿಟ್ಟ. ಅನಂತ ಯುಧಿಷ್ಠರ, ಧೃತರಾಷ್ಟ್ರಾದಿಗಳು ರಾಜವ್ಯೆಭವದಿಂದ ಭೀಷ್ಮನ ಅಂತ್ಯಸಂಸ್ಕಾರ ಮಾಡಿ ಗಂಗಾನದಿಯಲ್ಲಿ ಮುಳುಗಿ ತರ್ಪಣ ಕೊಟ್ಟರು. ಆಗ ಗಂಗಾದೇವಿ ದಿವ್ಯರೂಪದಿಂದ ಕಾಣಿಸಿಕೊಂಡು ತನ್ನ ಮಗನ ಸಾವಿಗಾಗಿ ಪ್ರಲಾಪಿಸಿದಾಗ, ಆಕೆಯನ್ನು ಕೃಷ್ಣ ಸಮಾಧಾನ ಪಡಿಸಿದ. ಈ ವೃತ್ತಾಂತಗಳು ಭಾರತದ ಆದಿಪರ್ವದಿಂದ ಹಿಡಿದು ಅನುಶಾಸನಪರ್ವದವರೆಗೂ ಬಂದಿವೆ.

	ಕನ್ನಡ ಸಾಹಿತ್ಯದಲ್ಲಿ ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಭೀಷ್ಮ ಅತ್ಯಂತ ಸಾಮಥ್ರ್ಯವುಳ್ಳವನೂ ದಕ್ಷನೂ ಆಗಿದ್ದುದರ ಜೊತೆಗೆ ವಿದ್ವತ್ತು-ವಿವೇಕದ ಸಂಗಮದಂತೆ ಚಿತ್ರಿತಗೊಂಡಿದ್ದಾನೆ.				
	(ಬಿ.ಎನ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ